Home Churches About
 

Chapter 1

1. ದೇವರ ಚಿತ್ತಾನುಸಾರವಾಗಿ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಎಫೆಸ ದಲ್ಲಿರುವ ಪರಿಶುದ್ಧರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಗಸ್ತರಿಗೂ--
2. ನಮ್ಮ ತಂದೆಯಾದ ದೇವ ರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
3. ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ಆಶೀರ್ವಾದ ಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
4. ನಾವು ಪ್ರೀತಿಯಲ್ಲಿದ್ದು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ನಿರ್ದೋಷಿಗಳೂ ಆಗಿರಬೇಕೆಂದು ಆತನು ಜಗತ್ತಿಗೆ ಅಸ್ತಿವಾರ ಹಾಕುವದಕ್ಕಿಂತ ಮುಂಚೆ ನಮ್ಮನು ಕ್ರಿಸ್ತನಲ್ಲಿ) ಆರಿಸಿಕೊಂಡನು.
5. ಆತನು ತನ್ನ ಚಿತ್ತದ ದಯಾ ಪೂರ್ವಕವಾದ ಆನಂದಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೋಸ್ಕರ ದತ್ತುಪುತ್ರ ಸ್ವೀಕಾರ ಮಾಡುವಂತೆ ಮೊದಲೇ ಸಂಕಲ್ಪಿಸಿ.
6. ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ.
7. ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು.
8. ಹೀಗೆ ಆತನು ತನ್ನ ಕೃಪಾತಿಶಯದಲ್ಲಿ ಸಕಲ ಜ್ಞಾನವನ್ನೂ ಬುದ್ದಿಯನ್ನೂ ಇನ್ನೂ ಹೆಚ್ಚಾಗಿ ನಮ್ಮ ಕಡೆಗೆ ತೋರಿಸಿದ್ದಾನೆ.
9. ಆತನು ತನ್ನಲ್ಲಿ ಉದ್ದೇಶಿಸಿದ ಪ್ರಕಾರ ಆನಂದಪೂರ್ವಕವಾದ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದನು.
10. ಅದೇನಂದರೆ ಕಾಲವು ಪರಿಪೂರ್ಣವಾದ ಯುಗದಲ್ಲಿ ಆತನು ಪರಲೋಕದಲ್ಲಿರುವವುಗಳನ್ನೂ ಭೂ ಲೋಕದಲ್ಲಿರುವವುಗಳನ್ನೂ ಆತನಲ್ಲಿ ಅಂದರೆ ಕ್ರಿಸ್ತನಲ್ಲಿ ಎಲ್ಲವನ್ನು ಒಂದುಗೂಡಿಸಬೇಕೆಂದಿದ್ದನು.
11. ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.
12. ಕ್ರಿಸ್ತನ ಮಹಿಮೆಯು ಸ್ತುತಿಸಲ್ಪಡುವಂತೆ ಆತನಲ್ಲಿ ನಾವು ಮೊದಲು ನಂಬಿಕೆಯಿಟ್ಟೆವು.
13. ನಿಮ್ಮ ರಕ್ಷಣೆಯ ವಿಷಯವಾದ ಸುವಾರ್ತೆಯೆಂಬ ಸತ್ಯ ವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಸಹ ವಾಗ್ದಾನ ಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದಿರಿ.
14. ಆತನ ಮಹಿಮೆಯ ಸ್ತುತಿಗೋಸ್ಕರ ಕೊಂಡುಕೊಂಡ ಸ್ವಾಸ್ಥ್ಯದವರಿಗೆ ವಿಮೋಚನೆಯಾ ಗುವ ತನಕ ಆತನು (ಪವಿತ್ರಾತ್ಮನು) ನಮ್ಮ ಬಾಧ್ಯತೆಗೆ ಸಂಚಕಾರನಾಗಿದ್ದಾನೆ.
15. ಹೀಗಿರಲಾಗಿ ನಾನು ಸಹ ಕರ್ತನಾದ ಯೇಸು ವಿನಲ್ಲಿರುವ ನಿಮ್ಮ ನಂಬಿಕೆಯ ವಿಷಯವಾಗಿಯೂ ಪರಿಶುದ್ಧರೆಲ್ಲರ ಕಡೆಗಿರುವ ಪ್ರೀತಿಯ ವಿಷಯವಾಗಿ ಯೂ ಕೇಳಿ
16. ನನ್ನ ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆ ಮಾಡಿ ನಾನು ನಿಮ್ಮ ನಿಮಿತ್ತ ವಾಗಿ ಎಡೆಬಿಡದೆ ದೇವರಿಗೆ ಸ್ತೋತ್ರ ಮಾಡುತ್ತೇನೆ.
17. ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಪೂರ್ಣನಾದ ತಂದೆಯೂ ಆಗಿರುವಾತನು ತನ್ನ ವಿಷಯವಾದ ತಿಳುವಳಿಕೆಗನುಸಾರವಾಗಿ ಜ್ಞಾನ ಪ್ರಕಟನೆಗಳ ಆತ್ಮ ವನ್ನು ನಿಮಗೆ ಅನುಗ್ರಹಿಸುವಂತೆಯೂ
18. ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನ ಕರೆಯು ವಿಕೆಯ ನಿರೀಕ್ಷೆಯು ಎಂಥದೆಂಬದನ್ನೂ ಪರಿಶುದ್ಧ ರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ
19. ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದ ದ್ದೆಂಬದನ್ನೂ ಆತನ ಬಲಾತಿಶಯವು ಎಷ್ಟು ಮಹತ್ತಾದ ದ್ದೆಂಬದನ್ನೂ ನೀವು ತಿಳುಕೊಳ್ಳು ವಂತೆ ಅನುಗ್ರಹಿಸಲಿ.
20. ಬಲಾತಿಶಯವು ಕ್ರಿಸ್ತನಲ್ಲಿ ತೋರಿಬಂದಿದೆ; ಹೇಗಂ ದರೆ ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ
21. ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾಧಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೊಕದೊಳಗೆ ತನ್ನ ಸ್ವಂತ ಬಲಪಾರ್ಶ್ವದಲ್ಲಿ ಆತನನ್ನು ಕೂಡ್ರಿಸಿಕೊಂಡನು.
22. ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿದನು. ಇದಲ್ಲದೆ ಆತನನ್ನು ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು.
23. ಸಭೆಯು ಆತನ ದೇಹವಾಗಿದೆ; ಎಲ್ಲವನ್ನು ಎಲ್ಲಾ ಸಂಬಂಧದಲ್ಲಿ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆಯುಳ್ಳ ದಾಗಿದೆ.

Chapter 2

1. ಇದಲ್ಲದೆ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಆತನು ಬದುಕಿಸಿದನು.
2. ನೀವು ಪೂರ್ವದಲ್ಲಿ ಅಪರಾಧ ಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹ ಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡಿಸುವ ಆತ್ಮನಿಗನುಸಾರವಾಗಿ ನಡೆದುಕೊಂಡಿರಿ;
3. ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.
4. ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ
5. ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;)
6. ನಮ್ಮನ್ನು ಆತನ ಕೂಡ ಎಬ್ಬಿಸಿ ಕ್ರಿಸ್ತ ಯೇಸುವಿನಲ್ಲಿ ಆತನೊಂದಿಗೆ ಪರ ಲೋಕದ ಸ್ಥಳಗಳಲ್ಲಿ ಕೂಡ್ರಿಸಿದ್ದಾನೆ.
7. ಹೀಗೆ ಕ್ರಿಸ್ತ ಯೇಸುವಿನ ಲ್ಲಿರುವ ಕರುಣೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಣ ಯುಗಗಳಲ್ಲಿ ನಮಗೆ ತೋರಿಸಬೇಕೆಂದಿದ್ದನು.
8. ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
9. ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ.
10. ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
11. ಆದಕಾರಣ ಪೂರ್ವಕಾಲದಲ್ಲಿ ಶಾರೀರಿಕವಾಗಿ ಅನ್ಯಜನರಾಗಿದ್ದು ಶರೀರದಲ್ಲಿ ಕೈಗಳಿಂದ ಮಾಡಲ್ಪಟ ಸುನ್ನತಿಯಿದ್ದವರೆಂದು ಕರೆಯಲ್ಪಟ್ಟವರಿಂದ ಸುನ್ನತಿಯಿಲ್ಲ ದವರೆಂದು ನೀವು ಕರೆಯಲ್ಪಟ್ಟಿದ್ದೀರಿ.
12. ಇದಲ್ಲದೆ ನೀವು ಆ ಕಾಲದಲ್ಲಿ ಕ್ರಿಸ್ತನಿಲ್ಲದವರು ಇಸ್ರಾಯೇಲಿನ ಬಾಧ್ಯತೆಯಲ್ಲಿ ಹಕ್ಕಿಲ್ಲದವರೂ ಪರಕೀಯರು ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಿಗೆ ಅನ್ಯರೂ ನಿರೀಕ್ಷೆ ಯಿಲ್ಲದವರೂ ಈ ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ.
13. ಈಗಲಾ ದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸವಿಾಪಸ್ಥ ರಾದಿರಿ.
14. ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದ ಆತನೇ ನಮ್ಮ ಸಮಾಧಾನವಾಗಿ ನಮ್ಮಿಬ್ಬರನ್ನು ಅಗಲಿ ಸಿದ ಅಡ್ಡಗೋಡೆಯನ್ನು ಆತನು ಕೆಡವಿಹಾಕಿದನು.
15. ಆತನು ಇದ್ದ ದ್ವೇಷವನ್ನು ಅಂದರೆ ಶಾಸನಗಳ ಆಜ್ಞೆಗಳುಳ್ಳ ನ್ಯಾಯಪ್ರಮಾಣವನ್ನು ತನ್ನ ಶರೀರದ ಮೂಲಕ ರದ್ದುಗೊಳಿಸಿ ಸಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರಷನನ್ನಾಗಿ ಮಾಡಿದನು.
16. ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ.
17. ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.
18. ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು.
19. ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ಪರಿಶುದ್ಧರೊಂದಿಗೆ ಒಂದೇ ಪಟ್ಟಣದವರೂ ದೇವರ ಮನೆಯವರೂ ಆಗಿದ್ದೀರಿ.
20. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು;
21. ಆತನಲ್ಲಿ ಕಟ್ಟಡವು ಹೊಂದಿಕೆ ಯಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ದ ದೇವಾ ಲಯವಾಗುತ್ತದೆ.
22. ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.

Chapter 3

1. ಈ ಕಾರಣದಿಂದ ಅನ್ಯಜನರಾಗಿರುವ ನಿಮ್ಮ ನಿಮಿತ್ತ ಯೇಸು ಕ್ರಿಸ್ತನ ಸೆರೆಯವನಾದ ಪೌಲನೆಂಬ ನಾನು
2. ನಿಮಗೋಸ್ಕರ ವಾಗಿ ನನಗೆ ಕೊಡಲ್ಪಟ್ಟ ದೇವರ ಕೃಪಾಯುಗದ ವಿಷಯದಲ್ಲಿ ನೀವು ಕೇಳಿರುವದಾದರೆ
3. ಇದುವರೆಗೆ ಗುಪ್ತವಾಗಿದ್ದದನ್ನು ಆತನು ಪ್ರಕಟನೆಯಿಂದ ನನಗೆ ಹೇಗೆ ತಿಳಿಸಿದನೆಂಬದನ್ನು ಮೊದಲು ನಾನು ನಿಮಗೆ ಸಂಕ್ಷೇಪವಾಗಿ ಬರೆದೆನು;
4. (ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳುಕೊಳ್ಳ ಬಹುದು.)
5. ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಆತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿ ಮನುಷ್ಯ ಪುತ್ರರಿಗೆ ತಿಳಿಸಲ್ಪಡಲಿಲ್ಲ.
6. ಅದೇನಂದರೆ, ಅನ್ಯಜನರು (ಯೆಹೂದ್ಯರೊಂದಿಗೆ) ಸಹ ಬಾಧ್ಯರೂ ಒಂದೇ ದೇಹದವರೂ ಸುವಾರ್ತೆಯಿಂದ ಕ್ರಿಸ್ತನ ಮೂಲಕ ಆತನ ವಾಗ್ದಾನದಲ್ಲಿ ಪಾಲುಗಾರರೂ ಆಗಿರಬೇಕೆಂ ಬದೇ.
7. ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಅನುಗ್ರಹಿಸಿದ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
8. ಕ್ರಿಸ್ತನ ಶೋಧಿಸಲ ಶಕ್ಯವಾದ ಐಶ್ವರ್ಯದ ವಿಷಯವಾಗಿ ಅನ್ಯಜನರಿಗೆ ನಾನು ಸಾರುವ ಹಾಗೆ ಪರಿಶುದ್ಧರೊಳಗೆ ಅತ್ಯಲ್ಪ ನಾದ ನನಗೆ ಅನುಗ್ರಹಿಸೋಣವಾಯಿತು.
9. ಸಮಸ್ತ ವನ್ನು ಯೇಸು ಕ್ರಿಸ್ತನಿಂದ ಸೃಷ್ಟಿಸಿದ ದೇವರಲ್ಲಿ ಲೋಕಾದಿ ಯಿಂದ ಮರೆಯಾಗಿದ್ದ ಮರ್ಮದ ಅನ್ಯೋನ್ಯತೆಯು ಎಲ್ಲರಿಗೂ ತೋರುವಂತೆ ಮಾಡುವ ಹಾಗೆಯೂ
10. ನಾನಾ ವಿಧವಾದ ದೇವರ ಜ್ಞಾನವು ಪರಲೋಕದಲ್ಲಿ ಈಗ ರಾಜತ್ವಗಳಿಗೂ ಅಧಿಕಾರಗಳಿಗೂ ಸಭೆಯ ಮೂಲಕ ಗೊತ್ತಾಗಬೇಕೆಂಬದಾಗಿಯೂ ಆತನು ಉದ್ದೇಶಿಸಿದ್ದನು.
11. ನಮ್ಮ ಕರ್ತನಾದ ಕ್ರಿಸ್ತ ಯೇಸು ವಿನಲ್ಲಿ ಆತನು ಸಂಕಲ್ಪಿಸಿದ ಶಾಶ್ವತವಾದ ಸಂಕಲ್ಪದಂತೆ ಇದಾಯಿತು.
12. ಆತನಿಂದಾದ ನಂಬಿಕೆಯ ಮೂಲಕ ನಮಗೆ ಧೈರ್ಯವೂ ಭರವಸವುಳ್ಳ ಪ್ರವೇಶವೂ ಉಂಟಾಯಿತು.
13. ಆದದರಿಂದ ನಿಮ್ಮ ನಿಮಿತ್ತ ನನ ಗುಂಟಾದ ಕಷ್ಟಗಳಿಗಾಗಿ ನೀವು ಧೈರ್ಯಗೆಡಬಾರ ದೆಂದು ನಾನು ಅಪೇಕ್ಷಿಸುತ್ತೇನೆ. ಅವು ನಿಮ್ಮ ಗೌರವವಾಗಿವೆ.
14. ಈ ಕಾರಣದಿಂದ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯ ಮುಂದೆ ನನ್ನ ಮೊಣ ಕಾಲೂರಿ
15. ಯಾವ ತಂದೆಯ ಹೆಸರನ್ನು ಪರಲೋಕ ಭೂಲೋಕಗಳಲ್ಲಿರುವ ಕುಟುಂಬವೆಲ್ಲಾ ತೆಗೆದುಕೊಳ್ಳು ತ್ತದೋ, ಆ ತಂದೆಯು
16. ನಿಮಗೆ ತನ್ನ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ಆತನ ಆತ್ಮನ ಮೂಲಕ ಆಂತರ್ಯದಲ್ಲಿ ವಿಶೇಷ ಬಲವನ್ನು ಅನುಗ್ರಹಿಸುವ ಹಾಗೆಯೂ
17. ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ನಂಬಿಕೆಯ ಮೂಲಕ ವಾಸಿಸುವಂತೆಯೂ ನೀವು ಪ್ರೀತಿಯಲಿ ಬೇರೂರಿ ನೆಲೆಗೊಂಡು ನಿಂತು
18. ಪರಿಶುದ್ಧರೆಲ್ಲ ರೊಂದಿಗೆ ಅದರ ಅಗಲ ಉದ್ದ ಆಳ ಮತ್ತು ಎತ್ತರವನ್ನು ಗ್ರಹಿಸುವಂತೆಯೂ
19. ಜ್ಞಾನಕ್ಕೆ ವಿಾರುವ ಕ್ರಿಸ್ತನ ಪ್ರೀತಿ ಯನ್ನು ತಿಳಿದುಕೊಂಡು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ ನಿಮಗೆ ದಯ ಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
20. ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದಾತನಿಗೆ
21. ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್‌.

Chapter 4

1. ಆದದರಿಂದ ನೀವು ಕರೆಯಲ್ಪಟ್ಟ ಕರೆಯುವಿಕೆಗೆ ಯೋಗ್ಯರಾಗಿ ನಡೆದುಕೊಳ್ಳ ಬೇಕೆಂದು ಕರ್ತನ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
2. ನೀವು ಪೂರ್ಣ ವಿನಯ ಸಾತ್ವಿಕತ್ವ ಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವ ರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.
3. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ ಕೊಳ್ಳುವದಕ್ಕೆ ಆಸಕ್ತರಾಗಿರ್ರಿ.
4. ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ,
5. ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ.
6. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
7. ಆದರೆ ಕ್ರಿಸ್ತನು ಅನುಗ್ರಹಿಸಿದ ದಾನದ ಅಳತೆ ಗನುಸಾರವಾಗಿ ನಮ್ಮಲ್ಲಿ ಪ್ರತಿಯೊಬ್ಬನಿಗೆ ಕೃಪೆಯು ಕೊಡಲ್ಪಟ್ಟಿತು.
8. ಆದದರಿಂದ--ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ ಸೆರೆಯನ್ನು ಸೆರೆಹಿಡಿದುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಕೊಟ್ಟನು ಎಂದು ಆತನು ಹೇಳುತ್ತಾನೆ.
9. (ಏರಿ ಹೋದನೆಂದು ಹೇಳಿ ದ್ದರಲ್ಲಿ ಮೊದಲು ಭೂಮಿಯ ಅಧೋಭಾಗಕ್ಕೆ ಇಳಿ ದಿದ್ದನೆಂತಲೂ ಹೇಳಿದ ಹಾಗಾಯಿತಲ್ಲವೇ?
10. ಇಳಿದು ಬಂದಾತನು ಮೇಲಣ ಎಲ್ಲಾ ಆಕಾಶ ಗಳಿಗಿಂತ ಉನ್ನತವಾಗಿ ಏರಿ ಹೋದಾತನೇ; ಆದದರಿಂದ ಆತನು ಸಮಸ್ತವನ್ನು ತುಂಬಿದವ ನಾದನು).
11. ಪರಿಶುದ್ಧರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸೇವೆಯ ಕೆಲಸಕ್ಕೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೂಸ್ಕರವೂ
12. ಆತನು ಕೆಲವರನ್ನು ಅಪೋಸ್ತರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರ ನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು.
13. ಹೀಗೆ ನಾವೆಲ್ಲರೂ ನಂಬಿಕೆಯ ಅನ್ಯೋನ್ಯತೆಯಲ್ಲಿಯೂ ದೇವಕುಮಾರನ ಜ್ಞಾನದಲ್ಲಿಯೂ ಪರಿಪೂರ್ಣ ಮನುಷ್ಯನಾಗುವದಕ್ಕೆ ಕ್ರಿಸ್ತನ ಪರಿಪೂರ್ಣತೆಯ ನೀಳದ ಪ್ರಮಾಣಕ್ಕೆ ಮುಟ್ಟುವೆವು.
14. ನಾವು ಇನ್ನು ಮೇಲೆ ಹೊಂಚು ಹಾಕುವವರ ವಂಚನೆಗೂ ಮನುಷ್ಯರ ಕಪಟದಿಂದಲೂ ಮೋಸದ ಉಪಾಯ ಮಾಡುವ ತಂತ್ರದಿಂದಲೂ ಬೋಧನೆಯ ಪ್ರತಿಯೊಂದು ಗಾಳಿ ಯಿಂದಲೂ ಬಡಿಯಲ್ಪಟ್ಟು ಅತ್ತಿತ್ತ ನೂಕಾಡಲ್ಪಡುವ ಬಾಲಕರಂತೆ ಇರಬಾರದು.
15. ಆದರೆ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ ಎಲ್ಲಾ ವಿಷಯಗಳಲ್ಲಿ ತಲೆಯು ತಾನೇ ಆಗಿರುವ ಕ್ರಿಸ್ತನಲ್ಲಿ ಬೆಳೆಯಿರಿ.
16. ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲು ಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯಹೊಂದಿ ಪ್ರೀತಿ ಯಿಂದ ತನ್ನಲ್ಲಿ ಐಕ್ಯವಾಗಿದ್ದು ಭಕ್ತಿವೃದ್ಧಿಯನ್ನು ಹೊಂದುತ್ತದೆ.
17. ಆದದರಿಂದ ಅನ್ಯಜನರು ನಡೆದುಕೊಳ್ಳುವ ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರ ದೆಂದು ಕರ್ತನಲ್ಲಿರುವವನಾಗಿ ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ. ಅವರು ನಿಷ್ಪ್ರಯೋಜನ ವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ;
18. ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕುರುಡುತನದ ನಿಮಿತ್ತದಿಂದಲೂ ತಮ್ಮಲ್ಲಿರುವ ಆಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.
19. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.
20. ನೀವಾದರೋ ಕ್ರಿಸ್ತನನ್ನು ಹಾಗೆ ಕಲಿತುಕೊಳ್ಳಲಿಲ್ಲ.
21. ಆತನನ್ನೇ ಕೇಳಿದಿರಲ್ಲಾ, ಆತನಲ್ಲಿಯೇ ಉಪದೇಶ ವನ್ನು ಹೊಂದಿದಿರಲ್ಲಾ.
22. ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು.
23. ನೀವು ನಿಮ್ಮ ಮನಸ್ಸಿನಭಾವದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.
24. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ನೀತಿಯಲ್ಲಿಯೂ ನಿಜವಾದ ಪರಿಶುದ್ಧತೆಯಲ್ಲಿಯೂ ನಿರ್ಮಿಸಲ್ಪಟ್ಟಿದೆ.
25. ಆದ ಕಾರಣ ಸುಳ್ಳಾಡುವದನ್ನು ಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.
26. ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ;
27. ಸೈತಾನನಿಗೆ ಅವಕಾಶ ಕೊಡಲೇಬೇಡಿರಿ.
28. ಕಳವು ಮಾಡುವವನು ಇನ್ನು ಮೇಲೆ ಕಳವು ಮಾಡದೆ ಕೈಯಿಂದ ಯಾವದಾದರೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕೊರತೆಯಲ್ಲಿರುವವರಿಗೆ ಕೊಡು ವದಕ್ಕೆ ಅವನಿಂದಾ ಗುವದು.
29. ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.
30. ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.
31. ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.
32. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ.

Chapter 5

1. ಆದದರಿಂದ ನೀವು ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ದೇವರನ್ನು ಅನುಸರಿಸುವ ವರಾಗಿರ್ರಿ.
2. ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
3. ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು.
4. ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ, ಅಯುಕ್ತವಾಗಿವೆ; ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ.
5. ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ.
6. ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
7. ಆದದರಿಂದ ನೀವು ಅವರೊಂದಿಗೆ ಪಾಲುಗಾರ ರಾಗಿರಬೇಡಿರಿ.
8. ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿರುವದರಿಂದ ಬೆಳಕಿನ ಮಕ್ಕಳಂತೆ ನಡೆದುಕೊಳ್ಳಿರಿ.
9. ಆತ್ಮನ ಫಲವು ಎಲ್ಲಾ ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯ ದಲ್ಲಿಯೂ ಇರುತ್ತದೆ.
10. ಕರ್ತನಿಗೆ ಮೆಚ್ಚಿಕೆಯಾದದ್ದೇ ನೆಂಬದನ್ನು ಪರಿಶೋಧಿಸಿರಿ.
11. ತ್ತಲೆಗೆ ಸಂಬಂಧ ವಾದ ಕೃತ್ಯಗಳಿಂದ ಯಾವ ಫಲವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಖಂಡಿಸಿರಿ.
12. ಅವರು ರಹಸ್ಯವಾಗಿ ನಡಿಸುವ ಕೆಲಸ ಗಳನ್ನು ಕುರಿತು ಮಾತನಾಡುವದಾದರೂ ನಾಚಿಕೆಗೆ ಕಾರಣವಾಗಿದೆ.
13. ಆದರೆ ಖಂಡನೆಯಾಗುವವು ಗಳೆಲ್ಲವೂ ಬೆಳಕಿನಿಂದ ಪ್ರಕಟವಾಗುತ್ತವೆ; ಯಾಕಂದರೆ ಪ್ರಕಟಪಡಿಸುವಂಥದ್ದು ಬೆಳಕೇ.
14. ಆದದರಿಂದ-- ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನಗೆ ಪ್ರಕಾಶಕೊಡುವನು ಎಂದು ಆತನು ಹೇಳುತ್ತಾನೆ.
15. ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಜಾಗ್ರತೆಯಿಂದ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿ ರದೆ ಜ್ಞಾನವಂತರಾಗಿರ್ರಿ.
16. ದಿನಗಳು ಕೆಟ್ಟವುಗಳಾಗಿರು ವದರಿಂದ ಕಾಲವನ್ನು ಸುಮ್ಮನೆ ಕಳೆಯದೆ ಉಪಯೋಗಿ ಸಿಕೊಳ್ಳಿರಿ.
17. ಬುದ್ದಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.
18. ಮದ್ಯಪಾನ ಮಾಡಿ ಮತ್ತರಾಗಬೇಡಿರಿ, ಯಾಕಂದರೆ ಅದರಿಂದ ಪಟಿಂಗತನವು ಹುಟ್ಟುತ್ತದೆ. ಪವಿತ್ರಾತ್ಮನಿಂದ ತುಂಬಿದವರಾಗಿರ್ರಿ.
19. ಕೀರ್ತನೆಗಳಿಂದಲೂ ಸಂಗೀತ ಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮಗೆ ನೀವೇ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯದಲ್ಲಿ ಕರ್ತನಿಗೆ ಗಾನಮಾಡುತ್ತಾ ಇಂಪಾಗಿ ಹಾಡುತ್ತಾ ಇರ್ರಿ.
20. ಯಾವಾಗಲೂ ಎಲ್ಲಾ ಕಾರ್ಯಗಳಿ ಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಇರ್ರಿ.
21. ಇದಲ್ಲದೆ ದೇವರಿಗೆ ಭಯಪಡುವವರಾಗಿದ್ದು ಒಬ್ಬರಿ ಗೊಬ್ಬರು ವಿಧೇಯರಾಗಿ ನಡೆದುಕೊಳ್ಳಿರಿ.
22. ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.
23. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಆತನು (ಕ್ರಿಸ್ತನು) ದೇಹಕ್ಕೆ ರಕ್ಷಕ ನಾಗಿದ್ದಾನೆ,
24. ಆದದರಿಂದ ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನ ರಾಗಿರಬೇಕು.
25. ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.
26. ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ
27. ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ.
28. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೆ ಪ್ರೀತಿಸಿಕೊಳ್ಳುವನಾಗಿದ್ದಾನೆ.
29. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ. ಆದರೆ ಅದನ್ನು ಪೋಷಿಸಿ ಸಂರಕ್ಷಿಸುವ ಪ್ರಕಾರ ಕರ್ತನು ಸಭೆಯನ್ನು ಪೋಷಿಸಿ ಸಂರಕ್ಷಿಸುವಾತನಾಗಿದ್ದಾನೆ.
30. ನಾವು ಆತನ ದೇಹದ ಅಂಗಗಳೂ ಮಾಂಸವೂ ಎಲುಬುಗಳೂ ಆಗಿದ್ದೇವೆ.
31. ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿ ಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು.
32. ಇದೊಂದು ದೊಡ್ಡ ಮರ್ಮವೇ; ಆದರೆ ನಾನು ಕ್ರಿಸ್ತನ ವಿಷಯವಾಗಿಯೂ ಸಭೆಯ ವಿಷಯವಾಗಿಯೂ ಮಾತನಾಡುತ್ತೇನೆ.
33. ಆದಾಗ್ಯೂ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಸ್ತ್ರೀಯು ತನ್ನ ಗಂಡನನ್ನು ಗೌರವಿಸುವವಳಾಗಿ ನಡೆದುಕೊಳ್ಳಬೇಕು.

Chapter 6

1. ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿರ್ರಿ; ಇದು ನ್ಯಾಯವಾದದ್ದು.
2. ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು, ಇದು ವಾಗ್ದಾನಸಹಿತವಾದ ಮೊದಲನೇ ಆಜ್ಞೆಯಾಗಿದೆ.
3. ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹು ಕಾಲ ಬದುಕುವಿ.
4. ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನ ಶಿಕ್ಷೆಯಲ್ಲಿಯೂ ಉಪದೇಶದಲ್ಲಿಯೂ ಅವರನ್ನು ಬೆಳೆಸಿರಿ.
5. ಸೇವಕರೇ, ಶಾರೀರಕ್ಕನುಸಾರವಾಗಿ ನಿಮ್ಮ ಯಜ ಮಾನರಾಗಿರುವವರಿಗೆ ಕ್ರಿಸ್ತನಿಗೆಂದು ಹೃದಯ ಪೂರ್ವಕವಾಗಿ ನಡುಗುತ್ತಾ ವಿಧೇಯರಾಗಿರ್ರಿ.
6. ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಕಣ್ಣಿಗೆ ಕಾಣುವಾಗ ಮಾತ್ರ ಸೇವೆ ಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಹೃದಯ ಪೂರ್ವಕವಾಗಿ ನಡಿಸಿರಿ.
7. ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆ ಮಾಡುತ್ತೇವೆಂದು ಒಳ್ಳೇ ಮನಸ್ಸಿನಿಂದ ಸೇವೆಮಾಡಿರಿ.
8. ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬದನ್ನು ನೀವು ತಿಳಿದವರಾಗಿಯೇ ಇದ್ದೀರಿ.
9. ಯಜಮಾನರೇ, ನೀವು ಅದೇ ರೀತಿಯಾಗಿ ಮಾಡಿರಿ. ಪರಲೋಕದಲ್ಲಿ ನಿಮ್ಮ ಯಜಮಾನನಾಗಿರು ವಾತನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವದನ್ನು ಬಿಟ್ಟುಬಿಡಿರಿ.
10. ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
11. ನೀವು ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧ ಗಳನ್ನು ಧರಿಸಿಕೊಳ್ಳಿರಿ.
12. ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ದುಷ್ಟತನದ ಮೇಲೆಯೂ ಹೋರಾಡುವವರಾಗಿದ್ದೇವೆ.
13. ಆದದ ರಿಂದ ಕೆಟ್ಟ ದಿನದಲ್ಲಿ ನೀವು ಅವುಗಳನ್ನು ಎದುರಿಸಿ ಮಾಡಬೇಕಾದದ್ದೆಲ್ಲವನ್ನು ಮಾಡಿ ನಿಲ್ಲಲು ಶಕ್ತರಾಗು ವಂತೆ ದೇವರ ಸರ್ವಾಯುಧವನ್ನು ನಿಮಗಾಗಿ ತೆಗೆದು ಕೊಳ್ಳಿರಿ.
14. ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ಎದೆಕವಚವನ್ನು ಧರಿಸಿಕೊಳ್ಳಿರಿ.ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
15. ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
16. ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆ ಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ. ಆದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.
17. ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣ ವನ್ನು ಇಟ್ಟುಕೊಂಡು ಆತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ.
18. ನೀವು ಆತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧ ವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಪರಿಶುದ್ಧರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.
19. ನಾನು ಬಾಯಿ ತೆರೆಯುವಾಗ ಗುಪ್ತವಾಗಿದ್ದ ಸುವಾರ್ತೆಯ ಮರ್ಮವನ್ನು ಧೈರ್ಯವಾಗಿ ತಿಳಿಸುವದಕ್ಕೆ ಬೇಕಾದ ಮಾತನ್ನು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.
20. ಆ ಸುವಾರ್ತೆಯ ಮರ್ಮದ ನಿಮಿತ್ತವೇ ರಾಯಭಾರಿಯಾದ ನಾನು ಬೇಡಿಯಲ್ಲಿ ಬಿದ್ದಿದ್ದೇನಲ್ಲಾ; ಮಾತನಾಡಬೇಕಾದ ರೀತಿಯಲ್ಲಿ ನಾನು ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.
21. ಆದರೆ ನನ್ನ ವಿಷಯಗಳು ನಿಮಗೆ ಸಹ ಗೊತ್ತಾ ಗುವ ಹಾಗೆಯೂ ನಾನು ಹೇಗಿದ್ದೇನೆಂದು ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತನಾದ ಸೇವಕನೂ ಆಗಿರುವ ತುಖಿಕನು ನಿಮಗೆ ಎಲ್ಲವನ್ನೂ ತಿಳಿಸುವನು.
22. ನೀವು ನಮ್ಮ ಸಮಾಚಾರವನ್ನು ತಿಳುಕೊಳ್ಳುವ ಹಾಗೆಯೂ ಅವನು ನಿಮ್ಮ ಹೃದಯಗಳನ್ನು ಸಂತೈಸುವ ಹಾಗೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
23. ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ಶಾಂತಿಯು ನಂಬಿಕೆಯಿಂದ ಕೂಡಿದ ಪ್ರೀತಿಯು ಸಹೋದರರಿಗೆ ಇರಲಿ.
24. ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಯಥಾರ್ಥವಾಗಿ ಪ್ರೀತಿಸುವವರೆಲ್ಲರ ಮೇಲೆ ಕೃಪೆಯು ಇರಲಿ. ಆಮೆನ್‌.


Free counters!   Site Meter(April28th2012)